ಸುನಾಮಿ
	ಸಾಗರತಳದಲ್ಲಿ ಸಂಭವಿಸುವ ಭೂಕಂಪನ ಅಥವಾ ಜ್ವಾಲಾಮುಖಿ ಸ್ಫೋಟನದಿಂದ ಉದ್ಭವಿಸುವ ಪ್ರಳಯಾಂತಕ ತರಂಗ. ಇದರ ಅಲೆಯುದ್ದ ಬಲು ನಿಡಿದಾದುದರಿಂದ ಇದೊಂದು ಗಾಢ ಮೇಲ್ಮೈ ಇರುವ ದೈತ್ಯ ತರಂಗದಂತೆ ಎದುರಾದ ಸರ್ವವನ್ನೂ ಸ್ವಾಹಾಕರಿಸುತ್ತ ಮುನ್ನುಗ್ಗುತ್ತದೆ. ನಡುಗಡಲಿನಲ್ಲಿ ಪಾರ (ಆ್ಯಂಪ್ಲಿಟ್ಯೂಡ್) ಅತಿ ಹ್ರಸ್ವ, ಅಲ್ಲಿಯೇ ಮೇಲೆ ಸಾಗುವ ಹಡಗಿಗೆಕೂಡ ರಸಾತಳದಲ್ಲಿಯ ಈ ತುಮುಲದ ಅರಿವೇ ಬರದಷ್ಟು ಸೌಮ್ಯವಾಗಿರುತ್ತದೆ. ಆದರೆ ಈ ಅಗಾಧಶಕ್ತಿಯ ಹಠಾತ್ ಉತ್ಸರ್ಜನೆ ಜಲರಾಶಿಯ ಭಾರ ಭೇದಿಸುತ್ತ ದಂಡೆ ಸಮೀಪಿಸಿದಾಗ ಪಾರ ಅತಿಶಯವಾಗಿ ಲಂಬನಗೊಂಡು ಕೆಲವೇ ಅಲೆಯುದ್ದಗಳಲ್ಲಿ ಕೇಂದ್ರೀಕರಿಸುತ್ತದೆ. ಎಂದೇ ಇದು ಎರಗಿದೆಡೆ ಅಪಾರ ಜನ, ಧನ ಸಂಪತ್ತು ಮುಂತಾದವು ಧ್ವಂಸವಾಗುತ್ತವೆ.

	2004 ಡಿಸೆಂಬರ್ 26ರ ಮುಂಜಾನೆ 6-29ಕ್ಕೆ ಇಂಡೋನೇಷ್ಯದ ಸುಮಾತ್ರದಿಂದ 225 ಕಿಮೀ ವಾಯವ್ಯಕ್ಕೆ ಸಾಗರ ತಳದಿಂದ 40 ಕಿಮೀ ಭೂಗರ್ಭದ ಆಳದಲ್ಲಿ ಹಠಾತ್ತನೆ ಭೂಕಂಪನ ಸಂಭವಿಸಿತು. ಆಗ ಮೆಲ್ಲಮೆಲ್ಲನೆ ಕಡಲಲೆಗಳೆದ್ದು ಗಂಟೆಗೆ 200 ಕಿಮೀ ವೇಗದಲ್ಲಿ ಧಾವಿಸುತ್ತ ಜಲಪ್ರಳಯಕ್ಕೆ ಹೇತುವಾದುವು. ಭಾರತ, ಥೈಲೆಂಡ್, ಶ್ರೀಲಂಕಾ ಈ ಒಂದೊಂದು ದೇಶದ ತೀರಪ್ರದೇಶವೂ ಕ್ಷಣ ಮಾತ್ರದಲ್ಲಿ ದೈತ್ಯ ಜಲಪರ್ವತಗಳ ತೀವ್ರ ಆಘಾತಕ್ಕೆ ಸಿಕ್ಕಿದುವು.

	ಸುನಾಮಿ ಜಪಾನೀ ಮೂಲದ ಪದ. ಜಪಾನೀ ಭಾಷೆಯಲ್ಲಿ ತ್ಸು (ಣsu) ಎಂದರೆ ಬಂದರು (ಹಾರ್ಬರ್) ಎಂದೂ ನಾಮಿ ಎಂದರೆ ಒಂದರ ಬೆನ್ನಿಗೆ ಒಂದು ಪುಂಖಾನುಪುಂಖವಾಗಿ ತೀವ್ರವೇಗದಿಂದ ಬಂದು ಬಡಿದಪ್ಪಳಿಸುವ ತರಂಗಶ್ರೇಣಿ ಎಂದರ್ಥ. ಆದ್ದರಿಂದ ಸುನಾಮಿ ಎಂದರೆ ಬಂದರಕ್ಕೆ ಬಡಿಯುವ ಮಾರಿ ಅಲೆಗಳ ಸಾಲೆಂದು ಅರ್ಥ.

	ಭೂಮಿಯ ಮೂರನೆಯ ಎರಡು ಭಾಗವನ್ನು ನಾಲ್ಕು ಸಾಗರಗಳು ಆಕ್ರಮಿಸಿವೆ. ಈ ಪೈಕಿ ಅತ್ಯಂತ ದೊಡ್ಡದು ಪೆಸಿಫಿಕ್. ಇದು ಭೂಮಿಯ ಮೂರನೆಯ ಒಂದು ಭಾಗವನ್ನೇ ಕಬಳಿಸಿದೆ. ಒಂದೆಡೆ ಇದರ ಅಳ  ಎವರೆಸ್ಟ್ ಶಿಖರವನ್ನು ಮುಳುಗಿಸುವಷ್ಟಿದೆ (ಮೇರಿಯಾನ ಕಮರಿ ಎಂಬಲ್ಲಿ ಪೆಸಿಫಿಕ್ ಸಾಗರ 11,516 ಮೀಟರ್ ಆಳವಿದೆ). ಇದರ ತಳದಲ್ಲಿ ಸಹಸ್ರಾರು ಪರ್ವತಗಳ ಮಾಲೆ, ನೂರಾರು ಆಳ ಕಮರಿಗಳು, ಜ್ವಾಲಾಮುಖಿಯಿಂದಾದ ದ್ವೀಪಗಳ ಕಮಾನುಗಳು ಎಲ್ಲ ಮರಸು ಕುಳಿತಿವೆ. ಪೆಸಿಫಿಕ್ ಸಾಗರದ ಅಂಚನ್ನು ಬೆಂಕಿಯ ವರ್ತುಲ ಎಂದೇ ಕರೆಯುತ್ತಾರೆ. ಸದಾ ಒಂದಲ್ಲ ಒಂದೆಡೆ ಜ್ವಾಲಾಮುಖಿ ಕೆರಳುತ್ತಿರುವುದು. ಸಾಗರ ತಳಮಳಸಿ ಭೀಕರ ಭೂಕಂಪನಗಳಿಂದ ನಡುಗುತ್ತದೆ. ಅಲಾಸ್ಕ, ಫಿಲಿಪೀನ್, ಜಪಾನ್, ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕದ ಪಶ್ಚಿಮ ತೀರಗಳೆಲ್ಲ ಈ ಬೆಂಕಿಯ ವರ್ತುಲದ ಮೇಲೆಯೇ ನಿಂತಿವೆ. ಇದು ಸುನಾಮಿಗಳ ತೌರು. ಒಂದೇ ಒಂದು ದಿನದಲ್ಲಿ ಈ ಸಾಗರದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಹೆಬ್ಬಲೆಗಳು ಪ್ರವಹಿಸಬಲ್ಲವು.

	ಸಮುದ್ರದಡಿಯಲ್ಲಿಯ ಭೂಕಂಪನದಿಂದ ಉದ್ಭವಿಸುವ ಸುನಾಮಿಗೆ ಭೂಕಂಪನ ಸಮುದ್ರತರಂಗ (ಸೈಸ್ಮಿಕ್ ಸೀ ವೇವ್) ಎಂದು ಹೆಸರು. ಸುನಾಮಿ ನೀರಿನಲ್ಲಿ ಹಾದು ಹೋಗುವಂತೆಯೇ ಆದರೆ ಇನ್ನೂ ಹೆಚ್ಚಿನ ವೇಗದಲ್ಲಿ ಭೂಕಂಪನದ ಅಲೆಗಳು ಭೂಮಿಯೊಳಗೆ ಹಾದುಹೋಗುತ್ತವೆ. ಸುನಾಮಿಯ ವೇಗ ನೀರಿನ ಆಳವನ್ನು ಅವಲಂಬಿದೆ. 1960ರಲ್ಲಿ ಚಿಲಿಯ ತೀರದಲ್ಲಿ ಉದ್ಭವಿಸಿದ ಸುನಾಮಿ ಇಡೀ ಪೆಸಿಫಿಕ್ ತೀರದುದ್ದಕ್ಕೂ ಭಾರಿ ಹಾನಿಗೆ ಕಾರಣವಾಯಿತು. ಚಿಲಿಯಲ್ಲಿ 5,000ಕ್ಕೂ ಹೆಚ್ಚು ಜನರು ಸಾವಿಗೀಡಾದರು. ತೀರದುದ್ದಕ್ಕೂ ಆಸ್ತಿಪಾಸ್ತಿಗೆ ಭಾರಿ ಹಾನಿಯುಂಟಾಯಿತು. ಡಿಸೆಂಬರ್ 2004ರ ಕ್ರಿಸ್‍ಮಸ್ ಮಾರನೆಯ ದಿನದಂದು ಇಂಡೊನೇಷ್ಯದಲ್ಲಿ ಉದ್ಭವಿಸಿದ ಸುನಾಮಿಯಿಂದ ಬಂಗಾಲಕೊಲ್ಲಿಯ ವ್ಯಾಪ್ತಿಯಲ್ಲಿ ಬರುವ ಭಾರತದ ಚೆನ್ನೈ, ಪಾಂಡಿಚೇರಿ, ಆಂಧ್ರ, ಶ್ರೀಲಂಕಾ, ಅಂಡಮಾನ್ ಮತ್ತು ನಿಕೊಬಾರ್ ಭಾಗಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟು, ಆಸ್ತಿಪಾಸ್ತಿಗೆ ಅಪಾರ ಹಾನಿಸಂಭವಿಸಿತು.

	ವಿಜ್ಞಾನಿಗಳು ಸಮುದ್ರದಡಿಯಲ್ಲಿ ಭೂಕಂಪನ ಎಲ್ಲಿ, ಯಾವಾಗ ಸಂಭವಿಸುತ್ತದೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಭೂಕಂಪನ ಸಮುದ್ರತರಂಗ ಯಾವಾಗ ತೀರವನ್ನು ತಲಪಬಲ್ಲದು ಎಂಬುದನ್ನು ಮುಂಚಿತವಾಗಿಯೇ ತಿಳಿಸಬಲ್ಲರು. ಆದರೆ 2004ರಲ್ಲಿ ಸಂಭವಿಸಿದ ಸುನಾಮಿ ಬಗ್ಗೆ ಮುನ್ಸೂಚನೆ ನೀಡುವಲ್ಲಿ ಸಫಲರಾಗಲಿಲ್ಲ. ಇಂಡೊನೇಷ್ಯದಂಥ ರಾಷ್ಟ್ರದಲ್ಲಿ ಆಧುನಿಕ ಭೂಕಂಪನ ಮಾಪನ ಯಂತ್ರ ಇರದಿದ್ದುದೇ ಇದಕ್ಕೆ ಕಾರಣ. 				
			  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ